ಮತ ಎಣಿಕೆಗೆ ಭರ್ಜರಿ ವ್ಯವಸ್ಥೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ಬೆಳಿಗ್ಗೆ 8ಕ್ಕೆ ಆರಂಭವಾಗಲಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಸಂಪೂರ್ಣ ಸನ್ನದ್ಧಗೊಂಡಿದೆ.
ರಾಜ್ಯದಾದ್ಯಂತ 38 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಿ, ಅವುಗಳ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. 222 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ರಾಜರಾಜೇಶ್ವರಿ ನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರಗಳ ಮತದಾನ ಮುಂದೂಡಲಾಗಿದೆ. ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ, ಯಾವ ಪಕ್ಷ ಅಧಿಕಾರದತ್ತ ಸಾಗಬಹುದು ಎಂಬ ಆರಂಭಿಕ ಸುಳಿವು ಸಿಗುವ ಸಾಧ್ಯತೆ ಇದೆ.
ಬಿಜೆಪಿ 222, ಕಾಂಗ್ರೆಸ್ 221, ಜೆಡಿಎಸ್ 201, ಬಿಎಸ್‌ಪಿ 18 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. 2,436 ಪುರುಷ ಮತ್ತು 219 ಮಹಿಳೆಯರು ಸೇರಿದಂತೆ ಒಟ್ಟು 2,644 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಗೊಳ್ಳಲಿದೆ.
ಬೆಂಗಳೂರಿನ ಐದು ಕಡೆಗಳಲ್ಲಿ, ಮೈಸೂರು 2, ಚಿತ್ರದುರ್ಗ 2, ದಕ್ಷಿಣ ಕನ್ನಡ 2, ತುಮಕೂರು 3 ಹಾಗೂ ಉಳಿದ ಜಿಲ್ಲೆಗಳಲ್ಲಿ ತಲಾ 1 ಕಡೆ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಗೆ 16,662 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪೈಕಿ 3,410 ಮತ ಎಣಿಕೆ ಮೇಲ್ವಿಚಾರಕರು, 3,410 ಎಣಿಕೆ ಸಹಾಯಕರು ಮತ್ತು 3,410 ಮೈಕ್ರೊ ಅಬ್ಸರ್ವರ್ಸ್ ಇರುತ್ತಾರೆ. ಸುಮಾರು 888 ಮಂದಿ ಅಂಚೆ ಮತಪತ್ರಗಳನ್ನು ಎಣಿಸಲಿದ್ದಾರೆ. ಇವರ ಜೊತೆಗೆ ಹೆಚ್ಚುವರಿಯಾಗಿ 5,544 ಮಂದಿಯನ್ನು ಭದ್ರತಾ ಕೊಠಡಿಯಿಂದ ಇವಿಎಂಗಳನ್ನು ಮತ ಎಣಿಕೆ ಕೇಂದ್ರಕ್ಕೆ ತರಲು ನಿಯೋಜಿಸಲಾಗಿದೆ.
ಏಜೆಂಟರ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳು ಮತ ಎಣಿಕೆಯನ್ನು ಆರಂಭಿಸಲಿದ್ದಾರೆ. ಪ್ರಾರಂಭದಲ್ಲಿ ಅಂಚೆ ಮತಗಳ ಎಣಿಕೆಯಾಗಲಿದೆ. 57,786 ಕಂಟ್ರೋಲ್ ಯುನಿಟ್‍ಗಳನ್ನು ತೆರೆದು ಮತ ಎಣಿಕೆ ನಡೆಸಲಾಗುತ್ತದೆ. 57,786 ವಿ.ವಿ.ಪ್ಯಾಟ್‍ಗಳ ಪೈಕಿ ಪ್ರತಿ ಮತಕ್ಷೇತ್ರಕ್ಕೆ ಒಂದರಂತೆ ಒಂದೊಂದು ವಿ.ವಿ.ಪ್ಯಾಟ್ ಅನ್ನು ತೆರೆದು ಎಣಿಕೆ ಮಾಡಿ, ಕಂಟ್ರೋಲ್ ಯುನಿಟ್‍ನೊಂದಿಗಿನ ಫಲಿತಾಂಶವನ್ನು ತಾಳೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ 1,88,04,794 ಪುರುಷರು (ಶೇ 73.24), 1,77,77,039 ಮಹಿಳೆಯರು (ಶೇ 71.08) ಹಾಗೂ 294 ತೃತೀಯ ಲಿಂಗಿಗಳು ಮತ ಚಲಾಯಿಸಿದ್ದಾರೆ. ಒಟ್ಟು 3,65,82,127 ಮಂದಿ ಮತ ಚಲಾಯಿಸಿದ್ದಾರೆ ಎಂದರು.
ಮತ ಎಣಿಕೆಯ ಪ್ರತಿ ಹಾಲ್‍ನಲ್ಲಿ 7 ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
*
ಸಿಇಒ ಭೇಟಿ ಮಾಡಿದ ಮುನಿರತ್ನ
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿ ಅಕ್ರಮ ಸಂಗ್ರಹಕ್ಕೆ ಸಂಬಂಧಿಸಿದಂತೆ, ಶಾಸಕ ಮುನಿರತ್ನ ಸೋಮವಾರ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
‘ಈ ಪ್ರಕರಣದಲ್ಲಿ ಬಿಜೆಪಿ ಕೈವಾಡ ಇದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಕಣದಿಂದ ಹೊರ ಹಾಕಲು ಈ ತಂತ್ರ ಹೂಡಲಾಗಿದೆ. ಇಡೀ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು’ ಎಂದು ಅವರು ಆಯೋಗಕ್ಕೆ ಮನವಿ ಮಾಡಿದರು. ಅವರ ಜತೆ ಸಂಸದ ಡಿ.ಕೆ.ಸುರೇಶ್ ಇದ್ದರು.