‘ಮುಖ್ಯಮಂತ್ರಿ ಸ್ಥಾನ ಯಾರಪ್ಪನ ಮನೆ ಆಸ್ತಿ?‘

ಮೈಸೂರು: ‘ಮುಖ್ಯಮಂತ್ರಿ ಸ್ಥಾನ ಯಾರಪ್ಪನ ಮನೆಯ ಆಸ್ತಿ? ಮುಖ್ಯಮಂತ್ರಿಗಿರಿಯನ್ನು ದಲಿತರಿಗೆ ದೇಣಿಗೆ ಕೊಡ್ತಾರಾ‘ ಎಂದು ಜೆಡಿಎಸ್ ಮುಖಂಡ ಎಚ್‌.ವಿಶ್ವನಾಥ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಇಲ್ಲಿ ಸೋಮವಾರ ವಾಗ್ದಾಳಿ ನಡೆಸಿದರು.

‘ದಲಿತ ಮುಖ್ಯಮಂತ್ರಿಗೆ ನನ್ನ ತಕರಾರಿಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಗೆಲ್ಲುವುದು ಕಷ್ಟ ಎಂಬುದು ಅವರಿಗೆ ಮನವರಿಕೆಯಾಗಿದೆ. ಆ ಕಾರಣದಿಂದ ವರಸೆ ಬದಲಿಸಿದ್ದಾರೆ. ಚುನಾವಣೆಗೆ ಮುನ್ನವೇ ಈ ಮಾತನ್ನಾಡಬೇಕಿತ್ತು. ದಲಿತರನ್ನು ಈ ರೀತಿ ತುಳಿದ ಮುಖ್ಯಮಂತ್ರಿಯನ್ನು ನಾನು ಕಂಡೇ ಇಲ್ಲ’ ಎಂದು ಟೀಕಿಸಿದರು.

ಶ್ರೀನಿವಾಸ ಪ್ರಸಾದ್‌ ಭೇಟಿ: ಬಿಜೆಪಿ ಮುಖಂಡ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಅವರ ನಿವಾಸದಲ್ಲಿ ವಿಶ್ವನಾಥ್‌ ಭೇಟಿಯಾದರು. ಇಬ್ಬರೂ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದರು.

‘ಚಾಮುಂಡೇಶ್ವರಿ, ಬಾದಾಮಿ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸೋಲುವ ಪರಿಸ್ಥಿತಿ ಇದೆ. ಆದ್ದರಿಂದ ಈಗ ದಲಿತ ಮುಖ್ಯಮಂತ್ರಿಯ ವಿಷಯ ಎತ್ತಿದ್ದಾರೆ’ ಎಂದು ಶ್ರೀನಿವಾಸ ಪ್ರಸಾದ್‌ ಹೇಳಿದರು.

‘ಎರಡೂ ಕಡೆ ಗೆಲ್ಲುವ ಮತ್ತು ಕಾಂಗ್ರೆಸ್‌ ಬಹುಮತ ಪಡೆಯುವ ವಿಶ್ವಾಸ ಇದ್ದಿದ್ದರೆ ಅವರು ಈ ಹಿಂದೆ ಹೇಳುತ್ತಿದ್ದಂತೆ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದರು. ಇದೀಗ ಸೋಲಿನ ಭಯದಿಂದ ಮಾತು ಬದಲಿಸಿದ್ದಾರೆ’ ಎಂದು ಲೇವಡಿ ಮಾಡಿದರು.

Back to Top