ಎರಡು ಕಡೆ ಮರುಮತದಾನ

ಬೆಂಗಳೂರು/ ಕುಷ್ಟಗಿ: ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯ ಒಂದು ಮತಗಟ್ಟೆಯಲ್ಲಿ ಹಾಗೂ ಕುಷ್ಟಗಿ ತಾಲ್ಲೂಕಿನ ಮನ್ನೇರಾಳ ಗ್ರಾಮದ ಎರಡು ಮತಗಟ್ಟೆಗಳಲ್ಲಿ ಸೋಮವಾರ ಮರುಮತದಾನ ನಡೆಯಿತು.

ಲೊಟ್ಟೆಗೊಲ್ಲಹಳ್ಳಿಯ ಆರ್.ಎಂ.ವಿ. 2ನೇ ಹಂತದ ಗಾಂಧಿ ವಿದ್ಯಾಲಯ (ಕನ್ನಡ ಮತ್ತು ತಮಿಳು) ಶಾಲೆಯ ಮತಗಟ್ಟೆಯಲ್ಲಿ ನಡೆದ ಮರುಮತದಾನದಲ್ಲಿ ಶೇ 53.3ರಷ್ಟು ಮಂದಿ ಹಕ್ಕು ಚಲಾಯಿಸಿದರು. ಇಲ್ಲಿ ಮಧ್ಯಾಹ್ನ 3 ಗಂಟೆ ಬಳಿಕ ಮಳೆ ಸುರಿದಿದ್ದರಿಂದಾಗಿ ಮತದಾನಕ್ಕೆ ಅಡ್ಡಿ ಉಂಟಾಯಿತು.

ಮತಗಟ್ಟೆ ಸಮೀಪದ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಸ್‌.ಸುರೇಶ್ ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದರಿಂದ ಬೆಳಿಗ್ಗೆ ಕೆಲ ಹೊತ್ತು ಮತಗಟ್ಟೆ ಬಳಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಈ ಮತಗಟ್ಟೆಯ ಮತಯಂತ್ರದಲ್ಲಿ ಶನಿವಾರ ಮತದಾನದ ವೇಳೆ ಅಭ್ಯರ್ಥಿಯ ಹೆಸರಿನ ಎದುರಿನ ಗುಂಡಿಯನ್ನು ಒತ್ತಿದರೆ ವಿ.ವಿ.ಪ್ಯಾಟ್‌ನಲ್ಲಿ ಬೇರೊಬ್ಬ ಅಭ್ಯರ್ಥಿಯ ಚಿಹ್ನೆ ಕಾಣಿಸಿಕೊಳ್ಳುತ್ತಿತ್ತು. ಯಂತ್ರದಲ್ಲಿ ದೋಷವಿರುವುದು ಪತ್ತೆಯಾಗುವಷ್ಟರಲ್ಲಿ 49 ಮಂದಿ ಮತ ಚಲಾಯಿಸಿದ್ದರು. ಹಾಗಾಗಿ ಇಲ್ಲಿ ಮರುಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿತ್ತು.

ಮನ್ನೇರಾಳ ಗ್ರಾಮದ ಮತಗಟ್ಟೆಯಲ್ಲಿ ಸಂಜೆ 5 ಗಂಟೆ ಹೊತ್ತಿಗೆ ಮತಗಟ್ಟೆ ಸಂಖ್ಯೆ 20ರಲ್ಲಿ 454 (ಶೇ 75) ಹಾಗೂ 21ರಲ್ಲಿ 710 ಮಂದಿ (ಶೇ 63) ಮತ ಚಲಾಯಿಸಿದ್ದರು.

ಶನಿವಾರ ಮತದಾನದ ಸಂದರ್ಭದಲ್ಲಿ ಗೊಂದಲ ಉಂಟಾಗಿತ್ತು. ಗ್ರಾಮದ ಮತಗಟ್ಟೆ ಸಂಖ್ಯೆ 20ರಲ್ಲಿ 605 ಮತಗಳಿದ್ದವು. ಇಲ್ಲಿ 635 ಮತದಾನ ಆಗಿತ್ತು. ಮತಗಟ್ಟೆ 21ರ ಮತದಾರರು ಈ ಮತಗಟ್ಟೆಯಲ್ಲಿ ಮತದಾನ ಮಾಡಿದ್ದ ಪರಿಣಾಮವಾಗಿ ಈ ಸಂಖ್ಯೆ ಹೆಚ್ಚಾಗಿತ್ತು.

ಈ ಗೊಂದಲ ಚುನಾವಣಾಧಿಕಾರಿ ಗಮನಕ್ಕೆ ಬಂದು ಅವರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದರು. ಆಯೋಗದ ಸೂಚನೆಯಂತೆ ಇಂದು ಮರುಮತದಾನ ನಡೆದಿದೆ.

Back to Top