ಮಾವಿನ ಮಡಿಲ’ಲ್ಲಿ ರೆಡ್ಡಿ–ಸ್ವಾಮಿಯ ಜಿದ್ದಾಜಿದ್ದಿ

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ

ಕೋಲಾರ: ‘ಮಾವಿನ ಮಡಿಲು’ ಖ್ಯಾತಿಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ರಾಜಕೀಯದ ಒಳಸುಳಿಗಳು ಗಮನಾರ್ಹ. ಜಿಲ್ಲೆಯ ಅತಿ ದೊಡ್ಡ ಕ್ಷೇತ್ರವಾದ ಇಲ್ಲಿ ರಾಜಕೀಯವು ಜನರ ಮನಸ್ಸಿನ ಬದಲಿಗೆ ನರನಾಡಿಯಲ್ಲಿ ನೆತ್ತರ ರೀತಿಯಲ್ಲಿ ಹರಿಯುತ್ತಿದೆ.

ಕ್ಷೇತ್ರವು ಆರಂಭದಲ್ಲಿ ಮುಳಬಾಗಿಲನ್ನೂ ಒಳಗೊಂಡಂತೆ ದ್ವಿಸದಸ್ಯ ಕ್ಷೇತ್ರವಾಗಿತ್ತು. 1962ರಲ್ಲಿ ಮುಳಬಾಗಿಲಿನಿಂದ ಪ್ರತ್ಯೇಕವಾಗಿ ಏಕ ಸದಸ್ಯ ಕ್ಷೇತ್ರವಾಯಿತು. ಆರಂಭಿಕ ಕಾಲಘಟ್ಟದಲ್ಲಿ ಈ ಪ್ರದೇಶ ರಕ್ತಸಿಕ್ತ ರಾಜಕಾರಣಕ್ಕೆ ಹೆಸರಾಗಿತ್ತು. ನೆತ್ತರು ಹರಿಯದೆ ಚುನಾವಣೆ ನಡೆದ ಉದಾಹರಣೆಯೇ ಇರಲಿಲ್ಲ. ಕಾಲಚಕ್ರ ಉರುಳಿದಂತೆ ಚುನಾವಣಾ ರಾಜಕೀಯದ ಸ್ವರೂಪ ಬದಲಾಗಿ ಜನ ಶಾಂತಿಪ್ರಿಯರಾಗಿದ್ದಾರೆ.

ಕ್ಷೇತ್ರದಲ್ಲಿ ಒಕ್ಕಲಿಗ, ಪರಿಶಿಷ್ಟ ಜಾತಿ, ಕುರುಬ, ಬಲಜಿಗ ಹಾಗೂ ಮುಸ್ಲಿಮ್‌ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ರಾಜಕೀಯವಾಗಿ ಒಕ್ಕಲಿಗ ಸಮುದಾಯ ಹೆಚ್ಚು ಪ್ರಾಬಲ್ಯ ಹೊಂದಿದೆ.

ಕ್ಷೇತ್ರವು ಮೊದಲಿನಿಂದಲೂ ಪಕ್ಷ ರಾಜಕಾರಣಕ್ಕೆ ಅತೀತವಾಗಿದೆ. ಬೇರೆ ಕ್ಷೇತ್ರಗಳಂತೆ ಇಲ್ಲಿ ಪಕ್ಷ, ಹಣ ಅಥವಾ ಜಾತಿ ಕೇಂದ್ರಿತವಾಗಿ ಚುನಾವಣೆ ನಡೆದಿಲ್ಲ. ವ್ಯಕ್ತಿ ನಿಷ್ಠೆ, ಜನಪ್ರತಿನಿಧಿಗಳ ಅಭಿವೃದ್ಧಿ ಕೆಲಸ, ವೈಯಕ್ತಿಕ ವರ್ಚಸ್ಸಿನ ಮುಂದೆ ಪಕ್ಷಗಳು ಗೌಣ.

ಕ್ಷೇತ್ರದಲ್ಲಿ ಈವರೆಗೆ ನಡೆದಿರುವ 14 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್‌, 3 ಬಾರಿ ಜನತಾ ಪರಿವಾರ (ಜನತಾ ದಳ, ಜನತಾ ಪಕ್ಷ ಮತ್ತು ಜಾತ್ಯತೀತ ಜನತಾದಳ) ಹಾಗೂ 1 ಬಾರಿ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದಾರೆ. ಬಿಜೆಪಿ ಖಾತೆ ತೆರೆದಿಲ್ಲ. ಮೇಲ್ನೋಟಕ್ಕೆ ಈ ಅಂಕಿ ಸಂಖ್ಯೆಗಳು ಪಕ್ಷಗಳ ಬಲಾಬಲ ತಿಳಿಸಬಹುದು. ಆದರೆ, ಅಭ್ಯರ್ಥಿಗಳ ಮೇಲಿನ ಮತದಾರರ ನಿಷ್ಠೆಯ ಆಧಾರದಲ್ಲಿ ಪಕ್ಷಗಳು ಏಳು ಬೀಳು ಕಂಡಿವೆ.

ಸ್ವಾಮಿ– ರೆಡ್ಡಿ ಜಿದ್ದಾಜಿದ್ದಿ: 1978ರಿಂದ 2013ರವರೆಗಿನ 9 ಚುನಾವಣೆಗಳಲ್ಲಿ ‘ಸ್ವಾಮಿ’ (ಕೆ.ಆರ್‌.ರಮೇಶ್‌ ಕುಮಾರ್‌) ಮತ್ತು ‘ರೆಡ್ಡಿ’ (ಜಿ.ಕೆ.ವೆಂಕಟಶಿವಾರೆಡ್ಡಿ) ನಡುವೆ ನೇರ ಜಿದ್ದಾಜಿದ್ದಿ. ಕ್ಷೇತ್ರದ ಜನ ರಮೇಶ್‌ ಕುಮಾರ್‌ ಅವರನ್ನು ಪ್ರೀತಿಯಿಂದ ಸ್ವಾಮಿ ಎಂತಲೂ ವೆಂಕಟಶಿವಾರೆಡ್ಡಿ ಅವರನ್ನು ರೆಡ್ಡಿ ಎಂತಲೂ ಕರೆಯುತ್ತಾರೆ. ಇಲ್ಲಿ ಚುನಾವಣೆ ಎಂದರೆ ಸ್ವಾಮಿ– ರೆಡ್ಡಿ ನಡುವಿನ ಕಾದಾಟ. ಕಣದಲ್ಲಿನ ಬೇರೆ ಅಭ್ಯರ್ಥಿಗಳು ನೆಪಕ್ಕೆ ಮಾತ್ರ.

ಮತದಾರರ ಪ್ರೀತಿಯಲ್ಲಿ ಏರಿಳಿತವಾದಂತೆ ಸ್ವಾಮಿ, ರೆಡ್ಡಿ ನಡುವೆ ಸೋಲು– ಗೆಲುವು ಅದಲು ಬದಲಾಗಿದೆ. ರಮೇಶ್‌ ಕುಮಾರ್‌ಗೆ 5 ಬಾರಿ ಹಾಗೂ ವೆಂಕಟಶಿವಾರೆಡ್ಡಿಗೆ 4 ಬಾರಿ ಜಯದ ಮಾಲೆ ಒಲಿದಿದೆ. ಸ್ವಾತಂತ್ರ್ಯ ಹೋರಾಟಗಾರರ ಕೌಟುಂಬಿಕ ಹಿನ್ನೆಲೆಯ ರಮೇಶ್‌ ಕುಮಾರ್‌ ಬ್ರಾಹ್ಮಣ ಸಮುದಾಯದವರು. ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಜನಸಂಖ್ಯೆ ಬೆರಳೆಣಿಕೆಯಷ್ಟಿದೆ. ಆದರೆ, ಬೇರೆ ಸಮುದಾಯಗಳ ಮತದಾರರು ಅವರ ಕೈ ಹಿಡಿದಿದ್ದಾರೆ.

ವೆಂಕಟಶಿವಾರೆಡ್ಡಿ ಸಹ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರು. ಒಕ್ಕಲಿಗ ಸಮುದಾಯದ ಅವರನ್ನು ಎಲ್ಲಾ ಸಮುದಾಯಗಳ ಮತದಾರರು ಒಪ್ಪಿಕೊಂಡಿದ್ದಾರೆ. ಕ್ಷೇತ್ರದ ಪ್ರಶ್ನಾತೀತ ನಾಯಕರಾದ ಈ ಇಬ್ಬರಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂದು ಹೇಳುವುದು ಸುಲಭವಲ್ಲ. ಇವರನ್ನು ರಾಜಕೀಯದ ತಕ್ಕಡಿಗೆ ಹಾಕಿದರೆ ಇಬ್ಬರದೂ ಒಂದೇ ತೂಕ.

ಅಭ್ಯರ್ಥಿಗಳು ಯಾರು?: ರಾಜಕೀಯದ ಏಳು ಬೀಳಿನ ನಡುವೆ ರಮೇಶ್‌ ಕುಮಾರ್‌ ಮತ್ತು ವೆಂಕಟಶಿವಾರೆಡ್ಡಿ ಮತ್ತೊಂದು ಚುನಾವಣೆಗೆ ಮುಖಾಮುಖಿಯಾಗುತ್ತಿದ್ದಾರೆ. ಜೆಡಿಎಸ್‌ನಲ್ಲಿ ವೆಂಕಟಶಿವಾರೆಡ್ಡಿ ಅವರನ್ನು ಈಗಾಗಲೇ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಅವರು ಜಿಲ್ಲೆಯ ಇತರ ಕ್ಷೇತ್ರಗಳ ಜತೆಗೆ ಸ್ವಕ್ಷೇತ್ರದಲ್ಲೂ ಗೆಲುವಿಗೆ ಬೆವರು ಹರಿಸಬೇಕಿದೆ. ಬಿಜೆಪಿಯಲ್ಲಿ ವೈದ್ಯ ಡಾ.ಕೆ.ಎನ್‌.ವೇಣುಗೋಪಾಲ್‌ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್‌ನಲ್ಲಿ ರಮೇಶ್‌ ಕುಮಾರ್‌ಗೆ ಟಿಕೆಟ್‌ ನಿಕ್ಕಿಯಾಗಿದೆ.

ಅಭಿವೃದ್ಧಿಯೇ ಶ್ರೀರಕ್ಷೆ: ರಮೇಶ್‌ ಕುಮಾರ್‌ ಐದು ವರ್ಷಗಳಲ್ಲಿ ವಿವಿಧ ವಸತಿ ಯೋಜನೆಗಳಡಿ ಕ್ಷೇತ್ರಕ್ಕೆ 18 ಸಾವಿರ ಮನೆಗಳನ್ನು ಮಂಜೂರು ಮಾಡಿಸಿದ್ದಾರೆ. ರಾಜ್ಯದ ಬೇರೆ ಯಾವುದೇ ಕ್ಷೇತ್ರಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮನೆಗಳು ಮಂಜೂರಾಗಿಲ್ಲ. ಕ್ಷೇತ್ರದ 475 ಹಳ್ಳಿಗಳ ಪೈಕಿ 315 ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಜಿಲ್ಲೆಯ ಕೆರೆಗಳನ್ನು ತುಂಬಿಸುವ ಉದ್ದೇಶಕ್ಕೆ ರೂಪಿಸಿರುವ ಕೋರಮಂಗಲ– ಚಲ್ಲಘಟ್ಟ ವ್ಯಾಲಿ (ಕೆ.ಸಿ ವ್ಯಾಲಿ) ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಆದರೆ, ಬೆಂಗಳೂರಿನ ಕೊಳಚೆ ನೀರನ್ನು ಕೆರೆಗಳಿಗೆ ಹರಿಸುವುದಕ್ಕೆ ಜನರ ಆಕ್ರೋಶವಿದೆ.

ಕ್ಷೇತ್ರದ ವ್ಯಾಪ್ತಿಯ ಚಲ್ದಿಗಾನಹಳ್ಳಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ನಿರ್ಮಿಸಲಾಗಿದೆ. ಜೆ.ತಿಮ್ಮಸಂದ್ರದಲ್ಲಿ ₹ 500 ಕೋಟಿ ಅಂದಾಜು ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಕಲ್ಲೂರು ಗ್ರಾಮದಲ್ಲಿ ಕ್ಯಾನ್ಸರ್‌ ಆಸ್ಪತ್ರೆ, ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರ ಹಾಗೂ ತೀವ್ರ ನಿಗಾ ಘಟಕ ಆರಂಭಕ್ಕೆ ಚಾಲನೆ ದೊರೆತಿದೆ.

ಕ್ಷೇತ್ರದ ಸ್ತ್ರೀಶಕ್ತಿ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ ಮೂಲಕ ಸುಮಾರು ₹ 150 ಕೋಟಿ ಬಡ್ಡಿರಹಿತ ಸಾಲ ವಿತರಿಸಲಾಗಿದೆ. ರಮೇಶ್‌ ಕುಮಾರ್‌ರ ಕೈಗೊಂಬೆಯಾಗಿರುವ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಯು ಶ್ರೀನಿವಾಸಪುರ ಕ್ಷೇತ್ರದಲ್ಲಿ ಮತದಾರರ ಓಲೈಕೆಗಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಸಾಲ ವಿತರಿಸಿದೆ ಎಂದು ಪ್ರತಿಪಕ್ಷದವರು ಆರೋಪಿಸುತ್ತಾರೆ. ಅಭಿವೃದ್ಧಿ ವಿಚಾರದಲ್ಲಿ ರಮೇಶ್‌ ಕುಮಾರ್‌ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತದೆ.

ಅಭಿವೃದ್ಧಿ ಕಾರ್ಯಗಳೇ ಚುನಾವಣೆಯಲ್ಲಿ ತಮಗೆ ಶ್ರೀರಕ್ಷೆಯಾಗಲಿವೆ ಎಂದು ರಮೇಶ್‌ ಕುಮಾರ್‌ ಬಲವಾಗಿ ನಂಬಿದ್ದಾರೆ. ಹಿಂದಿನ ಚುನಾವಣೆಗಳಂತೆ ಈ ಬಾರಿಯೂ ಸೋಲು ಗೆಲುವಿನ ಕೈ ಅದಲು ಬದಲಾಗುವುದೇ ಎಂಬುದು ಯಕ್ಷಪ್ರಶ್ನೆ.

Back to Top