ಮತದಾನದ ಅವಕಾಶಕ್ಕೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಬಳ್ಳಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ನೌಕರರ ಪೈಕಿ ಸುಮಾರು 200 ಮಂದಿ ಈವರೆಗೆ ತಮಗೆ ಅಂಚೆ ಮತಪತ್ರ ತಲುಪಿಲ್ಲ, ಕೂಡಲೇ ಮತಪತ್ರ ನೀಡಿ ಮತದಾನಕ್ಕೆ ಅವಕಾಶ ಕೊಡಿ ಎಂದು ಆಗ್ರಹಿಸಿ ಸೋಮವಾರ ಸಹಾಯಕ ಚುನಾವಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆದರೆ ಪ್ರತಿಭಟನಾಕಾರರ ಆರೋಪ ಅಲ್ಲಗಳೆದ ಉಪ ಚುನಾವಣಾಧಿಕಾರಿ ನರಸಿಂಹಮೂರ್ತಿ, ‘ಸುಮಾರು 300 ನೌಕರರ ಅರ್ಜಿಗಳು ಮತದಾರರ ಪಟ್ಟಿಯ ಭಾಗದ ಸಂಖ್ಯೆ ಮತ್ತು ಮತದಾರರ ಕ್ರಮ ಸಂಖ್ಯೆ ತಾಳೆಯಾಗದೆ ತಿರಸ್ಕೃತಗೊಂಡಿವೆ. ಕೆಲವರು ಅಂಚೆ ಮತಪತ್ರಕ್ಕಾಗಿ ನಮೂನೆ 12ರ ಅರ್ಜಿ ಭರ್ತಿ ಮಾಡಿ ಸಲ್ಲಿಸಿಲ್ಲ’ ಎಂದು ಹೇಳಿದರು.
ನರಸಿಂಹಮೂರ್ತಿ ಅವರ ಮಾತಿಗೆ ಅನೇಕ ನೌಕರರು ಮತ್ತು ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ಉಪ ಚುನಾವಣಾಧಿಕಾರಿ ಅವರ ಕಚೇರಿಗೆ ಬಂದ ಚುನಾವಣಾಧಿಕಾರಿ ಶಿವಸ್ವಾಮಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು.