‘ಅದೃಷ್ಟದ ಕ್ಷೇತ್ರ’ ಬಿಡುವರೇ ಕುಮಾರಸ್ವಾಮಿ?

ರಾಮನಗರ: ‘ಚನ್ನಪಟ್ಟಣ– ರಾಮನಗರ ನನ್ನ ಎರಡು ಕಣ್ಣುಗಳು’ ಎಂದು ಹೇಳುತ್ತಲೇ ಬಂದಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈಗ ಒಂದು ಅವುಗಳಲ್ಲಿ ಒಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಾದ ಅನಿವಾರ್ಯ ಬಂದೊದಗಿದೆ. ತಮ್ಮ ‘ಅದೃಷ್ಟದ ಕ್ಷೇತ್ರ’ವನ್ನೇ ಅವರು ಮತ್ತೊಬ್ಬರಿಗೆ ಧಾರೆ ಎರೆಯುವ ಸಾಧ್ಯತೆ ಹೆಚ್ಚಾಗಿದೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಒಂದು ಕ್ಷೇತ್ರವನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ಇರುವುದರಿಂದ, ಅವರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.
ಅದೃಷ್ಟದ ಕ್ಷೇತ್ರ: ಗೌಡರ ಕುಟುಂಬಕ್ಕೆ ರಾಮನಗರವು ಬಲು ಅದೃಷ್ಟದ ಕ್ಷೇತ್ರವಾಗಿದೆ. ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಇಬ್ಬರೂ ಇಲ್ಲಿಂದಲೇ ಗೆದ್ದು ಮುಖ್ಯಮಂತ್ರಿ ಗದ್ದುಗೆ ಏರಿದವರು.
1989ರ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಹಾಗೂ ಕನಕಪುರ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ ನೆಲ ಕಚ್ಚಿದ್ದ ದೇವೇಗೌಡರಿಗೆ, 1994ರ ಚುನಾವಣೆಯಲ್ಲಿ ರಾಜಕೀಯ ಪುನರ್ಜನ್ಮ ನೀಡಿದ್ದು ಇದೇ ರಾಮನಗರ ಕ್ಷೇತ್ರ. ಆ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾ ದಳದ ಪರ ಅಲೆ ಇದ್ದು, ಗೌಡರಿಗೆ ಮುಖ್ಯಮಂತ್ರಿ ಆಗುವ ಯೋಗ ಕೂಡಿ ಬಂದಿತು. ಮುಂದಿನ ಒಂದೆರಡು ವರ್ಷಗಳಲ್ಲಿ ಅವರು ದೇಶದ ಪ್ರಧಾನಿಯೂ ಆದರು.
ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಪಟ್ಟದ ಭಾಗ್ಯ ನೀಡಿದ್ದೂ ಇದೇ ಕ್ಷೇತ್ರ. 1999ರ ಚುನಾವಣೆಯಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಅವರ ಎದುರು ಪರಾಭವಗೊಂಡಿದ್ದ ಎಚ್‌ಡಿಕೆ, 2004ರ ಚುನಾವಣೆಯಲ್ಲಿ ಇಲ್ಲಿ ಮೊದಲ ಗೆಲುವು ದಾಖಲಿಸಿದರು. 2006ರಲ್ಲಿ ರಾಜ್ಯ ರಾಜಕೀಯದ ಸನ್ನಿವೇಶ ಬದಲಾಗಿ ಮುಖ್ಯಮಂತ್ರಿಯೂ ಆದರು. ಬಳಿಕ 2008 ಹಾಗೂ 2013ರ ಚುನಾವಣೆಗಳಲ್ಲಿ ಇಲ್ಲಿಂದ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.
ತಮಗೆ ರಾಜಕೀಯ ಪುನರ್ಜನ್ಮ ಕೊಟ್ಟ ರಾಮನಗರಕ್ಕೆ ಕುಮಾರಸ್ವಾಮಿ 2008ರಲ್ಲಿ ಜಿಲ್ಲಾ ಕೇಂದ್ರದ ಪಟ್ಟ ಕಟ್ಟಿ ‘ಋಣ ಸಂದಾಯ’ ಮಾಡುವ ಪ್ರಯತ್ನ ಮಾಡಿದ್ದಾರೆ. ತಾಲ್ಲೂಕಿನ ಕೇತಗಾನಹಳ್ಳಿಯಲ್ಲಿ ಜಮೀನು ಕೊಂಡು ಇದೇ ‘ಮಣ್ಣಿನ ಮಗ’ನಾಗಿ ಬಿಂಬಿಸಿಕೊಂಡಿದ್ದಾರೆ. ಪ್ರತಿ ವರ್ಷ ಚಾಮುಂಡಿ ಹಬ್ಬದಲ್ಲಿ ತಪ್ಪದೇ ಪಾಲ್ಗೊಂಡು ‘ನನ್ನ ಮತ್ತು ರಾಮನಗರದ ನಡುವಿನ ಸಂಬಂಧ ತಾಯಿ–ಮಗನ ಹಾಗೆ’ ಎನ್ನುತ್ತಾರೆ.
ರಾಜಕೀಯ ಲೆಕ್ಕಾಚಾರ: ಇಷ್ಟೆಲ್ಲ ಇದ್ದ ಮೇಲೆ ಅವರು ರಾಮನಗರ ಕ್ಷೇತ್ರವನ್ನೇ ಉಳಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ಮೂಡುವುದು ಸಹಜ. ಆದರೆ, ರಾಜಕೀಯ ಲೆಕ್ಕಾಚಾರಗಳು ಮಾತ್ರ ಬೇರೆಯದನ್ನೇ ಹೇಳುತ್ತಿವೆ.
ಚನ್ನಪಟ್ಟಣಕ್ಕೆ ರಾಜೀನಾಮೆ ನೀಡಿದರೆ, ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಅಲ್ಲಿ ಸಿ.ಪಿ. ಯೋಗೇಶ್ವರ್ ಅವರಿಂದ ತೀವ್ರ ಪ್ರತಿಸ್ಪರ್ಧೆ ಎದುರಾಗುವುದು ಖಚಿತ. ಅಲ್ಲಿ ಉಪ ಚುನಾವಣೆ ನಡೆದಿದ್ದೇ ಆದಲ್ಲಿ ಬಿಜೆಪಿ ಸುಲಭವಾಗಿ ಬಿಟ್ಟುಕೊಡುವ ಸಾಧ್ಯತೆಯೂ ಕಡಿಮೆ.
ಅಲ್ಲಿನ ಜನ ಐದು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದ ಯೋಗೇಶ್ವರ್ ಅವರಿಗೆ ಈ ಬಾರಿ ಕೊಕ್ ನೀಡಿ, ಜೆಡಿಎಸ್ ಅನ್ನು ಎತ್ತಿ ಹಿಡಿದಿದ್ದಾರೆ. ಹೀಗಾಗಿ, ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರೆ ಮುಂದೆ ಸಂಕಷ್ಟ ಎದುರಿಸಬೇಕಾಗಬಹುದು ಎಂಬುದು ಜೆಡಿಎಸ್‌ನ ಲೆಕ್ಕಾಚಾರ.
ರಾಮನಗರ ಕ್ಷೇತ್ರದಲ್ಲಿ ಸ್ಪರ್ಧೆ ಇದ್ದದ್ದು, ಇರುವುದು ಜೆಡಿಎಸ್–ಕಾಂಗ್ರೆಸ್ ನಡುವೆ. ಇದೀಗ ಕಾಂಗ್ರೆಸ್ ಮೈತ್ರಿಯ ಹಸ್ತ ಚಾಚಿದೆ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರೂ ಜೆಡಿಎಸ್ ಸುಲಭವಾಗಿ ಗೆಲುವು ಸಾಧಿಸಬಹುದಾಗಿದೆ. ಈ ಕಾರಣಕ್ಕೆ ಎಚ್‌ಡಿಕೆ ತಮ್ಮ ಅದೃಷ್ಟದ ಕ್ಷೇತ್ರವನ್ನೇ ಬಿಟ್ಟುಕೊಡುವ ಲೆಕ್ಕಾಚಾರ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕುಮಾರಸ್ವಾಮಿ ಇಲ್ಲಿ ರಾಜೀನಾಮೆ ನೀಡಿದರೆ, ಪತ್ನಿ ಅನಿತಾ ಅವರನ್ನೇ ಕಣಕ್ಕೆ ಇಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿ ಅದಕ್ಕೆ ‘ಕುಟುಂಬ ರಾಜಕಾರಣ’ ಅಡ್ಡಿ ಬರುವ ಸಾಧ್ಯತೆ ಕಡಿಮೆ. ಇಲ್ಲವಾದಲ್ಲಿ, ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಲೆಕ್ಕಾಚಾರವೂ ನಡೆದಿದೆ.