ಚುನಾವಣಾ ವೆಚ್ಚ: ₹10 ಸಾವಿರ ಕೋಟಿ ಮೀರಿದ ಖರ್ಚು!

ನವದೆಹಲಿ: ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯು ದೇಶದಲ್ಲಿಯೇ ಅತ್ಯಂತ ದುಬಾರಿ ಚುನಾವಣೆ ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿಎಂಎಸ್) ಎಂಬ ಸಂಶೋಧನಾ ಸಂಸ್ಥೆ ಹೇಳಿದೆ.
ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಚುನಾವಣೆಗಾಗಿ ₹ 9,500 ಕೋಟಿಯಿಂದ ₹ 10,500 ಕೋಟಿಯಷ್ಟು ವೆಚ್ಚ ಮಾಡಿವೆ. ಇದು 2013ರ ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ವೆಚ್ಚದ ಎರಡು ಪಟ್ಟಿಗಿಂತಲೂ ಅಧಿಕ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದ ವೆಚ್ಚ ಸೇರ್ಪಡೆ ಆಗಿಲ್ಲ ಎಂದು ಸಿಎಂಎಸ್ ತಿಳಿಸಿದೆ.
ಕರ್ನಾಟಕದಲ್ಲಿ ಚುನಾವಣಾ ವೆಚ್ಚದ ಬಗ್ಗೆ ಸಿಎಂಎಸ್ ಕಳೆದ 20 ವರ್ಷಗಳಿಂದ ಸಮೀಕ್ಷೆ ನಡೆಸುತ್ತಾ ಬಂದಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಚುನಾವಣಾ ವೆಚ್ಚ ಹೆಚ್ಚು ಎಂದು ಈ ಸಮೀಕ್ಷೆಯ ಆಧಾರದಲ್ಲಿ ಸಿಎಂಎಸ್ ಹೇಳಿದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಚುನಾವಣೆಗಾಗಿ ಅತಿ ಹೆಚ್ಚು ಖರ್ಚು ಮಾಡುವ ರಾಜ್ಯಗಳು ಎಂದು ಹೇಳಿದೆ.
**
ಲೋಕಸಭೆ ಚುನಾವಣಾ ವೆಚ್ಚ ₹ 60 ಸಾವಿರ ಕೋಟಿ!
ಕರ್ನಾಟಕದ ಚುನಾವಣೆಯ ವೆಚ್ಚದ ಆಧಾರದಲ್ಲಿ ಹೇಳುವುದಾದರೆ, 2019ರ ಲೋಕಸಭೆಯ ಚುನಾವಣೆಗೆ ಪಕ್ಷಗಳು ₹ 50 ಸಾವಿರ ಕೋಟಿಯಿಂದ ₹ 60 ಸಾವಿರ ಕೋಟಿವರೆಗೆ ವೆಚ್ಚ ಮಾಡಬಹುದು ಎಂದು ಸಿಎಂಎಸ್ನ ಎನ್. ಭಾಸ್ಕರ ರಾವ್ ಅಂದಾಜಿಸಿದ್ದಾರೆ. 2014ರ ಲೋಕಸಭಾ ಚುನಾವಣೆಗೆ ಒಟ್ಟು ₹ 30 ಸಾವಿರ ಕೋಟಿ ಖರ್ಚಾಗಿತ್ತು ಎಂದು ಸಿಎಂಎಸ್ನ ಲೆಕ್ಕಾಚಾರ ಹೇಳುತ್ತದೆ.
2019ರ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ಖರ್ಚು ಶೇ 55ರಿಂದ ಶೇ 60ರಷ್ಟಿರಲಿದೆ. ವಿವಿಧ ಪಕ್ಷಗಳು ಮಾಡುವ ಒಟ್ಟು ವೆಚ್ಚದ ಅರ್ಧಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಆಡಳಿತ ಪಕ್ಷವೇ ಖರ್ಚು ಮಾಡಲಿದೆ ಎಂದೂ ಸಿಎಂಎಸ್ ಹೇಳಿದೆ.
**
ಸಮೀಕ್ಷೆ ಹೇಗೆ?
* ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಹಣ ಪಡೆದುಕೊಂಡ ಮತದಾರರ ಶೇಕಡಾವಾರು
* ಲೆಕ್ಕಾಚಾರ ಮತದಾರರಿಗೆ ಪಕ್ಷಗಳು ನೀಡಿದ ಮೊತ್ತದ ಸರಾಸರಿ
* ವಿವಿಧ ರೀತಿಯ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಮತ್ತು ಪಕ್ಷಗಳು ಮಾಡಿದ ಖರ್ಚು
* ಖರ್ಚಿನ ಮೇಲೆ ನಿಗಾ ಇರಿಸಿ ಮತ್ತು ವಿವಿಧ ರೀತಿಯ ಜನರ ಜತೆ ಚರ್ಚಿಸಿ ಒಟ್ಟು ವೆಚ್ಚವನ್ನು ಅಂದಾಜಿಸಲಾಗಿದೆ